ಪ್ರಮೇಯ ಮತ್ತು ಪ್ರಮಾತೃ - 
 	ಬುದ್ಧಿ ಯಾವ ಯಾವದನ್ನು ಕುರಿತು ಪ್ರವೃತ್ತವಾಗಬಹುದೊ ಇಲ್ಲವೆ ಚಿಂತಿಸಬಲ್ಲದೊ ಇಲ್ಲವೆ ವಿಚಾರ ಮಾಡಬಲ್ಲದೊ ಅದೆಲ್ಲವೂ ಬುದ್ಧಿ ಅಥವಾ ಮನಸ್ಸಿನ ವಿಷಯವೆನಿಸುತ್ತದೆ. ಅದನ್ನೇ ತತ್ತ್ವಶಾಸ್ತ್ರದಲ್ಲಿ ಪ್ರಮೇಯವೆನ್ನುವುದು (ಆಬ್ಜೆಕ್ಟ್). ಪ್ರಮೇಯ ಅಥವಾ ಜ್ಞಾನವಿಷಯ ಬಾಹ್ಯವಸ್ತುವೇ ಆಗಿರಬೇಕೆಂಬ ನಿಯಮವೇನೂ ಇಲ್ಲ. ಪ್ರಮೇಯವಾದ ವಿಶ್ವವೆಂದರೆ ಬಾಹ್ಯ ಭೌತಿಕ ವಿಶ್ವವೆಂದೇ ತೀರ್ಮಾನವಿಲ್ಲ. ಏಕೆಂದರೆ ಬುದ್ಧಿ ಅಥವಾ ಮನಸ್ಸು ವಿಷಯಗ್ರಹಣ ಮಾಡುವ ಪರಿ ಒಂದೇ ಆಗಿಲ್ಲ. ಬಾಹ್ಯ ವಸ್ತುಗಳ ಗ್ರಹಣ ಅದರ ಅನೇಕ ಪರಿಗಳಲ್ಲಿ ಒಂದು ಮಾತ್ರ. ಸ್ಮøತಿಯಲ್ಲಿ ಬರುವ ಚಿತ್ರಗಳು, ಕಲ್ಪಿತ ವಸ್ತುಗಳು, ಕೇವಲ ಮನಸ್ಸೇ ಸೃಷ್ಟಿಸುವ ಪದಾರ್ಥಗಳು-ಈ ಎಲ್ಲವೂ ತತ್ತ್ವಶಾಸ್ತ್ರದಲ್ಲಿ ಪ್ರಮೇಯಗಳೇ ಆಗುತ್ತವೆ. ಗಂಧರ್ವನಗರ, ಮೊಲದ ಕೋಡು ಮುಂತಾದ ಆತ್ಯಂತ ಅಸಂಭವ ವಸ್ತುಗಳು ಕೂಡ ಮನಸ್ಸಿನ ವ್ಯಾಪಾರಕ್ಕೆ ವಿಷಯಗಳೆನಿಸಿ ಪ್ರಮೇಯಗಳಾಗಬಲ್ಲುವು. ಪ್ರಮೇಯವೆಂದರೆ ಬಾಹ್ಯವಸ್ತುವೇ ಎಂದು ಹೇಳುವುದು ಇನ್ನೊಂದು ದೃಷ್ಟಿಯಿಂದಲೂ ತಪ್ಪಾಗುತ್ತದೆ. ಪ್ರಮೇಯ ಮತ್ತು ಪ್ರಮಾತೃಗಳು (ಸಬ್‍ಜೆಕ್ಟ್ಸ್) ಭಿನ್ನ ಭಿನ್ನವಾಗಿರುವುದನ್ನಂತೂ ಒಪ್ಪಲೇಬೇಕು. ಇಲ್ಲಿ ಸತ್ತೆಯ ದ್ವೈವಿಧ್ಯವನ್ನು ಒಪ್ಪದೆ ಗತ್ಯಂತರವಿಲ್ಲ. ಪ್ರಮಾತೃವಿನ ಅನುಭವಪ್ರಪಂಚ ಮತ್ತು ಪ್ರಮೇಯ ಅಥವಾ ವಿಷಯದ ಪ್ರಪಂಚ ಎರಡೂ ಬೇರೆ ಬೇರೆಯೆಂದಾದ ಮೇಲೆ ಒಂದು ಇನ್ನೊಂದಕ್ಕೆ ಕಾರಣವೆಂಬ ವಿಮರ್ಶೆಗೂ ಆಸ್ಪದ ದೊರೆಯುತ್ತದೆ. ಅದರ ಇವೆರಡು ಪ್ರಪಂಚಗಳ ಅರ್ಥವ್ಯಾಪ್ತಿ ಒಂದನ್ನೊಂದು ಒಳಗೊಳ್ಳುವಷ್ಟು ವಿಶಾಲವಿರುವುದರಿಂದ ಇವುಗಳ ಪರಸ್ಪರ ಆರೋಪಭ್ರಮೆ ಸರ್ವಸಾಮಾನ್ಯವೆನ್ನಬಹುದು. ಜ್ಞಾನಕ್ರಿಯೆಗೆ ಮುಂಚೆಯೆ ಪ್ರಮೇಯ ವಸ್ತು ಹಾಗು ಪ್ರಮಾತೃಗಳ ಭೇದ ಸಿದ್ಧವಾಗಿಬಿಟ್ಟಿರುತ್ತದೆ. ಆದರೆ ಒಂದು ವಸ್ತು ಜ್ಞಾನವಿಷಯವಾದಾಗ ಅದು ಪ್ರಮಾತೃವಿನ ಅನುಭವವ್ಯಾಪ್ತಿಯಲ್ಲಿ ಲೀನವೂ ಆಗುತ್ತದೆ; ಸ್ವತಂತ್ರವಾದ ಬಾಹ್ಯ ಅಸ್ತಿತ್ವ ಅದಕ್ಕಾಗಲೂ ತಪ್ಪುವಂತಿಲ್ಲ. ಹೀಗಾಗಿ ಪ್ರಮೇಯಗಳಿಗೆಲ್ಲ ಬಾಹ್ಯಾಸ್ತಿತ್ವದ ಸ್ಥಿತಿಯಂತೆ ಜ್ಞಾನವಿಷಯತ್ವದ ಎರಡನೆಯ ಸ್ಥಿತಿಯು ಉಂಟೆಂದು ತಿಳಿಯಬೇಕಾಗುತ್ತದೆ. ಈ ಎರಡು ಸ್ಥಿತಿಗಳೂ ಬೇರೆಬೇರೆಯೆ; ಅವು ಒಂದೇ ಆಗಲಾರವು. ಜ್ಞಾನವಿಷಯ ಅಥವಾ ಪ್ರಮೇಯಕ್ಕೆ ಬಾಹ್ಯಾಸ್ತಿತ್ವ ಉಂಟೆಂದು ತಪ್ಪು ತಿಳಿದಾಗ ಭ್ರಮೆ ಜನಿಸುತ್ತದೆ. ಒಬ್ಬನು ನಮ್ಮನ್ನು ಕೊಲ್ಲಲು ಬಂದಿದ್ದಾನೆಂಬ ಮನೋವಿಕಲ್ಪ ವಸ್ತುಸತ್ಯವಾಗಿರದೆ ಕಲ್ಪನಾಮಾತ್ರ ಸತ್ಯ ಅಥವಾ ಪ್ರಮಾತೃವಿನ ಕಲ್ಪಿತಭ್ರಮೆಯಾಗಿರಬಹುದಾಗಿದೆ. ಹೀಗೆ ತತ್ತ್ವಶಾಸ್ತ್ರದಲ್ಲಿ ಬಾಹ್ಯವಸ್ತು ಮತ್ತು ಪ್ರಮೇಯಗಳು ಭಿನ್ನವೆಂಬುದನ್ನು ಮನಗಾಣಬೇಕು. ಅನುಭವದಲ್ಲಿ ಪ್ರಮಾತೃವಿನ ಪ್ರಾಧಾನ್ಯವನ್ನೇ ಎತ್ತಿಹೇಳುವ ಧಾರ್ಮಿಕರು ಹಾಗು ತತ್ತ್ವಚಿಂತಕರೂ ಇದ್ದಾರೆ. ಪ್ರಮಾತೃವಿನ ಮನೋಗೋಚರವಾಗಿದುದಷ್ಟೆ ಸತ್ಯವೆನ್ನುವ ವಾದಕ್ಕೆ ಮನೋವಿಜ್ಞಾನವಾದವೆನ್ನಬಹುದು.

	ಈ ವಾದದ ಪುರಸ್ಕರ್ತರು ಭಾರತೀಯ ದರ್ಶನಗಳಲ್ಲಿ ದೊರೆಯುವಂತೆ ಪಾಶ್ಚಾತ್ಯ ತತ್ತ್ವಶಾಸ್ತ್ರದ ಇತಿಹಾಸದಲ್ಲಿಯೂ ಕಾಣಿಸುತ್ತಾರೆ. ಸೌತ್ರಾಂತಿಕ ಬೌಥರು ವಿಜ್ಞಾನವಾದಿಗಳೆಂದೇ ಪ್ರಸಿದ್ಧರಾಗಿದ್ದಾರೆ. ಗೌಡಪಾದರ ಮಾಂಡೂಕ್ಯೋಪನಿಷತ್ಕಾರಿಕೆಯಲ್ಲಿ ಬರುವ ಅದ್ವೈತ ವೇದಾಂತವೂ ಇದಕ್ಕೆ ಸಮೀಪವರ್ತಿಯೇ ಆಗಿದೆ. ಅದರಂತೆ ಪಾಶ್ಚಾತ್ಯರಲ್ಲಿ ಅರಿಯುತ್ತೇನೆ; ಅದರಿಂದ ನಾನು ಇದ್ದೇನೆ ಎಂಬ ಸೂತ್ರದಿಂದ ಆರಂಭವಾಗುವ ಈ ಮನೋಮಾತ್ರ ಪ್ರಾಧಾನ್ಯವಾದ ಬರ್ಕೆಲೆಯಲ್ಲಿ ಶಿಖರವನ್ನು ಮುಟ್ಟಿ ಎಲ್ಲ ಜ್ಞಾನವೂ ಪ್ರಮಾತೃಪರತಂತ್ರವೆಂಬ ಸಿದ್ಧಾಂತವಾಗಿ ಮಾರ್ಪಡುತ್ತದೆ. ಅವನ ಪ್ರಕಾರ ಬಾಹ್ಯ ವಸ್ತುಗಳ ಸತ್ತೆಯೆಂಬುದು ಕೇವಲ ಒಂದು ತಾರ್ಕಿಕ ಅನುಮಾನ ಮಾತ್ರ. ಇದೇ ರೀತಿ ಜರ್ಮನ್ ತತ್ತ್ವಜ್ಞಾನಿಯಾದ ಫಿಕ್ಟೆ ಕೂಡ ಇವುಗಳಲ್ಲಿ ಅಷ್ಟಿಷ್ಟು ಬದಲಾವಣೆಗಳನ್ನು ಮಾಡಿಕೊಂಡು ತನ್ನ ನೀತಿ ಮೀಮಾಂಸೆಯನ್ನು ಮುಂದುವರಿಸುತ್ತಾನೆ. ಲೈಪ್‍ನಿಟ್ಸ್ ಪ್ರಮೇಯವಸ್ತುಗಳಿಗಿಂತ ಪ್ರಮಾತೃ ಚೈತನ್ಯದ ಸ್ಥಾನ ಹೆಚ್ಚಿನದೆಂದು ಸ್ಥಾಪಿಸಲು ಶ್ರಮಿಸಿದ. ಆದರೆ ಬಾಹ್ಯ ಇಂದ್ರಿಯಗೋಚರ ವಸ್ತುಗಳಿಗೂ ಒಂದು ರೀತಿಯ ಸತ್ತೆಯುಂಟೆಂದು ಆತ ಒಪ್ಪುತ್ತಿದ್ದ. ಆದರೆ ಈ ಗೊಂದಲಗಳಿಗೆಲ್ಲ ಸಮರ್ಥವಾದ ಪರಿಹಾರವನ್ನು ಪ್ರಥಮತಃ ಸೂಚಿಸಿದ ಕೀರ್ತಿ ಕಾಂಟನದು. ಪ್ರಮಾತೃವಿನ ಚೇತನಾವ್ಯಾಪಾರವಿಲ್ಲದ ಪ್ರತ್ಯಕ್ಷ ಕುರುಡಾದರೆ, ಪ್ರತ್ಯಕ್ಷವಲ್ಲದ ಪ್ರಮಾತೃಜ್ಞಾನ ಬರಿದು ಎಂದು ಆತ ಮಾರ್ಮಿಕವಾಗಿ ಸಿದ್ಧ ಮಾಡಿದ. ಜ್ಞಾನಿವಿಷಯಗಳಾದಾಗ ಮಾತ್ರವೆ ವಸ್ತುಗಳಿಗೆ ನಿಜವಾದ ಅಸ್ತಿತ್ವವೆನ್ನುವಾಗಲೂ ಆತ ಸ್ವತಂತ್ರವಾಗಿ ಬಾಹ್ಯಸಿದ್ಧವಾಗಿರುವ ವಸ್ತುಗಳಷ್ಟೆ ಜ್ಞಾನವಿಷಯಗಳಾಗಬಲ್ಲವೆಂಬುದನ್ನು ಮನಗಂಡ. ಹೀಗೆ ಪ್ರಮೇಯ-ಪ್ರಮಾತೃಗಳ ದ್ವಿಮುಖ ಸಾಮರಸ್ಯವೇ ಮುಂದೆ ಮನಶ್ಯಾಸ್ತ್ರದ ಚಿಂತನೆಗಳಿಗೂ ಅಡಿಪಾಯವನ್ನೊದಗಿಸಿತು.

	ನೀತಿಶಾಸ್ತ್ರ ಹೇಳುವ ಪ್ರಕಾರ ನೈತಿಕ ಆಚರಣೆಗಳಿಗೆಲ್ಲ ಅಂತ್ಯಗುರಿ ಪ್ರಮಾತೃವಿನ ಮನದಲ್ಲಿ ಉಂಟಾಗುವ ಸಮಾಧಾನವೇ ಆಗಿದೆ. ಇದನ್ನೇ ಸುಖವೆಂದೂ ಕರೆಯಲಾಗುತ್ತದೆ. ಅದನ್ನು ಬೆಳೆಸುವ ಆಚರಣೆಯೆಲ್ಲ ಒಳ್ಳೆಯದು. ಅದನ್ನು ಹಾಳು ಮಾಡುವ ಕೃತಿ ಕೆಟ್ಟದ್ದು ಐಂದ್ರಿಯಿಕ ಸಮಾಧಾನ ಅಥವಾ ಸಂತೃಪ್ತಿ ನೀತಿಶಾಸ್ತ್ರದ ಒಂದು ವಾದವಾಗಿರುವಂತೆ. ಆಧ್ಯಾತ್ಮಿಕ ಆನಂದ ಅದಕ್ಕೆ ಪ್ರತಿಪಕ್ಷವಾಗಿರುವ ಇನ್ನೊಂದು ಪ್ರಬಲ ವಾದವಾಗಿದೆ.

	ಹಾಗೆಯೇ ಆಧ್ಯಾತ್ಮಶಾಸ್ತ್ರ ಅಂಗೀಕರಿಸುವ ಪಕ್ಷಗಳಲ್ಲಿಯೂ ಭಗವಂತನ ವಚನಕ್ಕೆ ಪ್ರಾಮುಖ್ಯ ಕೊಡದೆ, ಅದಕ್ಕಿಂತ ಹೆಚ್ಚಿನ ಮಹತ್ತ್ವವನ್ನು ಜ್ಞಾನಿಗಳು, ಸಾಧು-ಸಂತರ, ಜೀವನ್ಮುಕ್ತರ ಅನುಭವಕ್ಕೆ ಕೊಡುವ ಒಂದು ಪರಿಪಾಠ ಕೂಡ ಪ್ರಮಾತೃನಿಷ್ಠವಾದ ಚಿಂತನೆಯಿಂದಲೇ ಪ್ರಭಾವಿತವಾಗಿದೆಯೆನ್ನಬಹುದು. 				(ನೋಡಿ- ಪ್ರಮಾತೃವಾದ)
(ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ